ಜನಪದಗಳು, ಪ್ರಾಚೀನ ಭಾರತದ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಪ್ರಾಚೀನ ಭಾರತದ ಶಾಸ್ತ್ರಜ್ಞರ ಪ್ರಕಾರ ರಾಜ್ಯದ ಏಳು ಅಂಗಗಳಲ್ಲಿ ಒಂದು ಪ್ರಮುಖ ಅಂಗ. ಜನತೆಯನ್ನೊಳಗೊಂಡ ಸ್ವತಂತ್ರ ಅಧಿಕಾರವುಳ್ಳ ಪ್ರದೇಶ. ಜನಪದ ಜನತೆಗಿಂತ ಭೂ ಭಾಗಕ್ಕೆ ಅನ್ವಯಿಸುತ್ತದೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರಾದರೂ ಅದು ಸರಿ ಎನ್ನಿಸುವುದಿಲ್ಲ. ಏಕೆಂದರೆ, ಕೌಟಿಲ್ಯ ಹೇಳುವಂತೆ ಜನವಸತಿ ಇಲ್ಲದ ಕೇವಲ ಭೂಭಾಗ ರಾಜ್ಯವಾಗಲಾರದು. ಮನುಸ್ಮøತಿಯಲ್ಲಿ ಜನಪದವನ್ನು ದೇಶವೆಂದು ಕರೆಯಲಾಗಿದೆ. ಅದು ಒಣ ಹವೆಯುಳ್ಳದ್ದು, ಸಸ್ಯಭರಿತವಾದ್ದು, ರೋಗ ರುಜಿನಗಳಿಲ್ಲದ್ದು : ಅದು ಎಲ್ಲ ದೃಷ್ಟಿಗಳಿಂದಲೂ ಪರಿಪೂರ್ಣವಾಗಿರಬೇಕು ಎಂದು ಹೇಳಿದೆ. ಕೌಟಿಲ್ಯ ಇದನ್ನು ಜನಪದ ಸಂಪತ್ತು ಎಂದು ಕರೆದು ಈ ರೀತಿ ಬಣ್ಣಿಸುತ್ತಾನೆ. ಜನಪದ ಸ್ವಯಂಪೂರ್ಣವಾದ್ದು, ವಿನೀತರಾದ ಮಾಂಡಲಿ ಕರುಳ್ಳದ್ದು, ಫಲವತ್ತಾದ ಭೂಮಿಯಿಂದಲೂ ಗಣಿ, ಅಡವಿ, ಪುಷ್ಪವೃಕ್ಷಗಳಿಂದಲೂ ಸಂಪದ್ಭರಿತವಾದ್ದು, ಸ್ವಾಮಿಭಕ್ತಿಯುಳ್ಳ ಜನರಿಂದ ಕೂಡಿದ್ದು. ಇದೇ ಮಾತನ್ನು ಕಾಮಂದಕ (ನೀತಿಸಾರ) ವಿವರಿಸುತ್ತ, ಮಳೆಯನ್ನು ಅವಲಂಬಿಸದೆ ನೀರಿನ ಸಮೃದ್ಧಿಯುಳ್ಳದ್ದು, ಜಲಮಾರ್ಗ ಮತ್ತು ರಸ್ತೆಗಳಿಂದ ಕೂಡಿ ಸಾರಿಗೆ ಸೌಕರ್ಯವುಳ್ಳದ್ದು ಎಂದು ಮುಂತಾಗಿ ಹೇಳುತ್ತಾನೆ.

ಜನಪದ ಶಬ್ದವನ್ನು ಶಾಸನ ಮತ್ತು ಸಾಹಿತ್ಯಗಳಲ್ಲಿ ವಿಧವಿಧವಾಗಿ ಬಳಸಲಾಗಿದೆ. ಜನ ಮತ್ತು ಜನಪದವನ್ನು ಅಂದರೆ ನಾಡನ್ನೂ ನೋಡುತ್ತೇನೆ ಎಂದು ಅಶೋಕ ತನ್ನ ಶಾಸನಗಳಲ್ಲಿ ಹೇಳಿದ್ದಾನೆ. ಮಹಾಭಾರತ, ರಾಮಾಯಣ, ಮತ್ತು ಇತರ ಅನೇಕ ಗ್ರಂಥಗಳಲ್ಲಿ ಜನಪದ, ಜಾನಪದ ಎಂಬ ಪದಗಳು ಬಳಕೆಯಾಗಿವೆ. ಇವುಗಳ ಜೊತೆಗೆ ಅನೇಕ ಸಲ ಪೌರ ಎಂಬ ಪದವನ್ನು ಬಳಸಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಪೌರ ಎಂದರೆ ಪುರ ಅಥವಾ ನಗರದ ಜನರು ಎಂದು ಜಾನಪದ ಎಂದರೆ ಗ್ರಾಮಾಂತರದ ಅಥವಾ ದೇಶದ ಜನರು ಎಂದೂ ಅರ್ಥವಾಗುತ್ತದೆ. ಆದರೆ ಕೆಲವು ವಿದ್ವಾಂಸರು ಈ ಪದಗಳು ನಗರಗಳ ಮತ್ತು ದೇಶದ ಪ್ರಾತಿನಿಧಿಕ ಸಭೆಗಳನ್ನು ಸೂಚಿಸುತ್ತವೆ ಎಂದೂ ಅಭಿಪ್ರಾಯಪಡುತ್ತಾರೆ. ಜನಪದ ಎಂದರೆ ದೇಶದ ಪ್ರಾತಿನಿಧಿಕ ಸಭೆ ಎಂದು ಹೇಳಿ, ಇಂಥ ಸಭೆಗಳು ರಾಜ್ಯದ ಆಡಳಿತದಲ್ಲಿ ಬಹು ಪ್ರಮುಖವಾದ ಪಾತ್ರ ವಹಿಸುತ್ತಿದ್ದುವು ಎಂದು ಕೆ.ಪಿ. ಜಯಸ್ವಾಲ್ ಹೇಳುತ್ತಾರೆ. ಇದಕ್ಕೆ ಆಧಾರವಾಗಿ ಅನೇಕ ನಿದರ್ಶನಗಳನ್ನು ನೀಡುತ್ತಾರೆ. ಕ್ರಿ.ಪೂ. ಸು. 1ನೆಯ ಶತಮಾನದಲ್ಲಿ ಖಾರವೇಲನ ಹಾತಿಗುಂಫಾ ಶಾಸನದಲ್ಲಿ ಅರಸ ಜನಪದಕ್ಕೆ ಸಾವಿರಾರು ಅನುಗ್ರಹಗಳನ್ನು ನೀಡಿದನೆಂದು ಹೇಳಿದೆ. ಇಲ್ಲಿ ಅನುಗ್ರಹ ಎಂದರೆ ಅಧಿಕಾರ ಎಂದು ಅರ್ಥವಾಗುತ್ತದೆ. ರಾಮಾಯಣದಲ್ಲಿ ದಶರಥ ರಾಮನನ್ನು ಯುವರಾಜನೆಂದು ನಿಯಮಿಸುವಾಗ ಜನಪದದ ಒಪ್ಪಿಗೆ ಪಡೆದನೆಂದು ಹೇಳಲಾಗಿದೆ. ಜನಪದಗಳನ್ನು ಹೆಸರಿಸುವ ಮುದ್ರೆಗಳು ಸಿಕ್ಕಿವೆ. ಅರಸ ತನ್ನ ಪ್ರತಿನಿತ್ಯದ ಕಾರ್ಯಕ್ರಮಗಳಲ್ಲಿ ಪೌರಜನಪದಗಳನ್ನು ಸಂದರ್ಶಿಸಬೇಕೆಂದು ಅರ್ಥಶಾಸ್ತ್ರದಲ್ಲಿ ಹೇಳಲಾಗಿದೆ. ಜನಪದಗಳು ನಾಣ್ಯಗಳನ್ನು ಹೊರಡಿಸುತ್ತಿದ್ದುವೆಂದು ಹೇಳಲು ಆಧಾರಗಳಿವೆ. ಅರಸ ಹೆಚ್ಚಿನ ಹಣಕ್ಕಾಗಿ ಜನಪದಗಳನ್ನು ಕೇಳಬೇಕು ಎಂದು ಅರ್ಥಶಾಸ್ತ್ರದಲ್ಲಿ ಹೇಳಿದೆ. ಉಚ್ಚ ಅಧಿಕಾರಿಗಳು ಪೌರ ಜನಪದಗಳ ವಿಶ್ವಾಸ ಗಳಿಸಬೇಕು ಎಂದೂ ಹೇಳಲಾಗಿದೆ. ಹೀಗೆ, ಜನಪದಗಳು ಜನತೆಯ ಪ್ರಾತಿನಿಧಿಕ ಸಭೆಗಳಾಗಿದ್ದು, ಅರಸನ ಮೇಲೂ ರಾಜ್ಯದ ಆಡಳಿತದ ಮೇಲೂ ಬಹಳಷ್ಟು ನಿಯಂತ್ರಣ ಹೊಂದಿದ್ದುವು ಎಂಬುದು ಜಯಸ್ವಾಲರ ವಾದ.

ಆದರೆ ಮೇಲಿನ ನಿದರ್ಶನಗಳಲ್ಲಿ ಜನಪದವನ್ನು ಪ್ರಾತಿನಿಧಿಕ ಸಭೆ ಎಂಬ ಅರ್ಥದಲ್ಲಿ ಬಳಸಲಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಹಾತಿಗುಂಫಾ ಶಾಸನದಲ್ಲಿ ಅರಸ ಜನಪದಕ್ಕೆ ಅನುಗ್ರಹಗಳನ್ನು ನೀಡಿದನೆಂದಾಗ ಜನತೆಗೆ ಬಹು ವಿಧವಾದ ಸೌಕರ್ಯಗಳನ್ನು ಒದಗಿಸಿದ ಎಂಬ ಸಾಮಾನ್ಯ ಅರ್ಥ ಸರಿಯಾಗುತ್ತದೆ. ಅನುಗ್ರಹ ಎಂದರೆ ಅಧಿಕಾರ ಎಂದು ಅರ್ಥಮಾಡುವ ಅಗತ್ಯವಿಲ್ಲ. ಅಲ್ಲದೆ, ಸಾವಿರಾರು ಅಧಿಕಾರಗಳನ್ನು ಕೊಡುವ ಬಗೆಯಾದರೂ ಎಂತು ? ಅರಸ ಪ್ರತಿನಿತ್ಯದ ಕರ್ಮಗಳಲ್ಲಿ ಪೌರ ಜನಪದವನ್ನು ಸಂದರ್ಶಿಸಬೇಕೆಂದಾಗ, ಜನತೆಗೆ ದರ್ಶನವಿತ್ತು ಅವರ ಕಷ್ಟಸುಖಗಳನ್ನು ವಿಚಾರಿಸಬೇಕು ಎಂದು ಅರ್ಥ ಮಾಡಬಹುದಲ್ಲದೆ, ಅರಸ ದಿನವೂ ಈ ಪ್ರಾತಿನಿಧಿಕ ಸಭೆಗಳನ್ನು ಸಂದರ್ಶಿಸಬೇಕು ಎಂದು ಅರ್ಥವಾಗದು. ಜನಪದಗಳು ನಾಣ್ಯಗಳನ್ನು ಹೊರಡಿಸುತ್ತಿದ್ದುವೆಂದು ಎಲ್ಲಿಯೂ ಹೇಳಿಲ್ಲ. ಜಯಸ್ವಾಲರು ಉದಾಹರಿಸುವ ವಾಕ್ಯ, ಜನರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಮಾಡಿಸುವುದಕ್ಕೆ ಸಂಬಂಧಿಸಿದ್ದು ಎಂದು ಹೇಳಬಹುದಾಗಿದೆ. ದಶರಥ ರಾಮನನ್ನು ಯುವರಾಜನನ್ನಾಗಿ ಮಾಡುವ ಸಂದರ್ಭದಲ್ಲಿ ಉಕ್ತವಾದ ಜನಪದ ಸಾಮಾನ್ಯ ಜನತೆಗೆ ಸಂಬಂಧಿಸಿದೆಯಲ್ಲದೆ, ಅದೊಂದು ಪ್ರಾತಿನಿಧಿಕ ಸಭೆ ಎಂದು ಅರ್ಥವಾಗಲಾರದು. ಅಧಿಕಾರಿಗಳು ಪೌರ ಜನಪದಗಳ ವಿಶ್ವಾಸ ಗಳಿಸಬೇಕೆಂದು ಅರ್ಥವಾಗುತ್ತದೆಯೇ ಹೊರತು ತಮ್ಮ ಅಧಿಕಾರಕ್ಕಾಗಿ ಇಂಥ ಪ್ರಾತಿನಿಧಿಕ ಸಭೆಗಳನ್ನು ಸಂತುಷ್ಟಗೊಳಿಸಬೇಕು ಎಂದು ಅರ್ಥವಾಗುವುದಿಲ್ಲ. ಅರಸ ಹೆಚ್ಚಿನ ಹಣಕ್ಕಾಗಿ ಜನಪದಗಳನ್ನು ಯಾಚಿಸಬೇಕು ಎಂದಾಗ, ಜನತೆಯನ್ನು ಕೇಳಬೇಕು ಎಂದಷ್ಟೇ ಅರ್ಥವಾಗುತ್ತದೆ. ಹೀಗೆ ಜನಪದ ಎಂಬ ಶಬ್ದಕ್ಕೆ, ದೇಶ, ಜನತೆ ಎಂಬ ಅರ್ಥ ಆಗುತ್ತದೆ. ಇದೇ ಅರ್ಥದಲ್ಲಿ ಈ ಶಬ್ದವನ್ನು ಅಶೋಕನ ಶಾಸನಗಳಲ್ಲೂ ಬಳಸಲಾಗಿದೆ.
ಕ್ರಿ.ಪೂ. 7-6ನೆಯ ಶತಮಾನದ ಹೊತ್ತಿಗೆ, ಎಂದರೆ ಗೌತಮಬುದ್ಧನ ಜನನಕ್ಕಿಂತ ಸ್ವಲ್ಪ ಮುಂಚೆ, ಕಾಬೂಲಿನಿಂದ ಗೋದಾವರಿಯ ವರೆಗೆ ಚಿಕ್ಕ ಹಾಗೂ ದೊಡ್ಡ ರಾಜ್ಯಗಳು ಜನಪದ ಎಂಬ ಹೆಸರಿನಿಂದ ತಲೆ ಎತ್ತಿದುವು. ಅವುಗಳಲ್ಲಿ ಹಲವು ಅರಸೊತ್ತಿಗೆಗಳಾಗಿದ್ದುವು. ಮತ್ತೆ ಕೆಲವು ಗಣರಾಜ್ಯಗಳೆನ್ನಿಸಿಕೊಂಡುವು. ಇವುಗಳಲ್ಲಿ 16 ರಾಜ್ಯಗಳು ಸೋಳಸ ಮಹಾಜನಪದ ಅಥವಾ 16 ಮಹಾಜನಪದಗಳೆಂದು ಪ್ರಸಿದ್ಧಿ ಪಡೆದಿದ್ದುವು. ಬೌದ್ಧ ಗ್ರಂಥಗಳಾದ ಅಂಗುತ್ತರನಿಕಾಯ, ಮಹಾವಸ್ತು, ವಿನಯಪಿಟಕ ಮುಂತಾದವುಗಳಲ್ಲೂ ಜೈನರ ಭಗವತೀ ಸೂತ್ರದಲ್ಲೂ ಹಲವು ಪುರಾಣಗಳಲ್ಲೂ ಸೋಳಸ ಮಹಾಜನಪದಗಳನ್ನು ಕುರಿತ ಉಲ್ಲೇಖಗಳಿವೆ. ಈ ಗ್ರಂಥಗಳಲ್ಲಿ ಉಕ್ತವಾದ 16 ಮಹಾಜನಪದಗಳ ಹೆಸರಿನ ಪಟ್ಟಿಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಂಡುಬರುತ್ತದೆ. ಉದಾಹರಣೆಗೆ ವ್ರಿಜಿ ಹಾಗೂ ಮಲ್ಲ, ಇವು ಬೌದ್ಧ ಹಾಗೂ ಜೈನರ ಬರಹಗಳಲ್ಲಿ ಕಂಡುಬಂದರೂ ಪುರಾಣಗಳಲ್ಲಿ ಇವುಗಳ ಹೆಸರುಗಳು ಕಂಡುಬರುವುದಿಲ್ಲ. ಈ ವ್ಯತ್ಯಾಸಕ್ಕೆ ಜನಪದಗಳ ಬಗ್ಗೆ ಗ್ರಂಥಕರ್ತರ ಜ್ಞಾನ, ಅವುಗಳೊಂದಿಗೆ ಅವರಿಗೆ ಇದ್ದ ಸಂಪರ್ಕ ಮುಂತಾದವು ಕಾರಣಗಳೆಂದು ಹೇಳಲಾಗಿದೆ. ಮೇಲೆ ಹೇಳಿರುವ ಗ್ರಂಥಗಳಲ್ಲಿ ಬರುವ ಹೆಸರುಗಳ ಪಟ್ಟಿ ಸ್ವಲ್ಪ ವ್ಯತ್ಯಾಸವಾಗಿದ್ದರೂ ಸಾಮಾನ್ಯವಾಗಿ ಇವು ಸೋಳಸ ಮಹಾಜನಪದಗಳೆಂದು ಪರಿಗಣಿತವಾಗಿವೆ : 1 ಕಾಶಿ, 2 ಕೋಸಲ, 3 ಅಂಗ, 4 ಮಗಧ, 5 ವ್ರಿಜಿ (ವಜ್ಜಿ), 6 ಮಲ್ಲ, 7 ಚೇದಿ (ಚೇಟಿ), 8 ವತ್ಸ (ವತ್ಸ, ವಂಸ), 9 ಕುರು, 10 ಪಾಂಚಾಲ, 11 ಮತ್ಸ್ಯ (ಮಚ್ಚ), 12 ಶೂರಸೇನ, 13 ಅಸ್ಸಕ (ಅಶ್ಮಕ), 14 ಆವಂತಿ, 15 ಗಾಂಧಾರ, 16 ಕಾಂಭೋಜ.

ಕಾಶಿ : ಈಗಿನ ವಾರಾಣಸಿಯ ಸುತ್ತಮುತ್ತಲಿನ ಪ್ರದೇಶ. ಸಂಪತ್ತಿನಿಂದ ಕೂಡಿದ ಈ ಪ್ರದೇಶ ಉತ್ತರ ಹಾಗೂ ದಕ್ಷಿಣಗಳಲ್ಲಿ ವಾರಣಾ ಮತ್ತು ಅಸಿ ನದಿಗಳಿಂದ ಸುತ್ತುವರಿಯಲ್ಪಟ್ಟಿದ್ದುದರಿಂದ ಇದಕ್ಕೆ ವಾರಾಣಸಿ ಎಂದು ಹೆಸರಾಯಿತೆಂದು ತಿಳಿದುಬಂದಿದೆ. ಇದು ಗಂಗಾ ನದಿಯ ದಂಡೆಯ ಮೇಲಿದೆ. ಕಾಶಿಗೂ ಕೋಲಕಕ್ಕೂ ಸಾರ್ವಭೌಮತ್ವಕ್ಕಾಗಿ ಹೋರಾಟ ಇದ್ದೇ ಇರುತ್ತಿತ್ತು. ಕಾಶಿ ಮತ್ತು ಅಂಗ, ಕಾಶಿ ಮತ್ತು ಮಗಧ-ಇವುಗಳ ನಡುವೆಯೂ ಆಗಾಗ ತಿಕ್ಕಾಟ ನಡೆದೇ ಇತ್ತು. ಗೌತಮ ಬುದ್ಧನ ಕಾಲಕ್ಕಿಂತ ಸ್ವಲ್ಪ ಮುಂಚೆ ಇದು ಕೋಸಲ ರಾಜ್ಯಕ್ಕೆ ಸೇರಿಹೋಯಿತು.

ಕೋಸಲ : ಈಗಿನ ಅಯೋಧ್ಯೆಯ (ಔಧ್) ಭಾಗ. ಸರಯೂ ನದಿಯಿಂದ ಇದು ದಕ್ಷಿಣ ಹಾಗೂ ಉತ್ತರ ಕೋಸಲ ಎಂದು ವಿಭಾಗವಾಗಿತ್ತು. ಮಗಧ, ಸಾವತ್ತಿ ಅಥವಾ ಶ್ರಾವಸ್ತಿ, ಸಾಕೇತ ಇವು ಇದರ ರಾಜಧಾನಿಗಳಾಗಿದ್ದುವು. ಕಾಶಿ ಕೋಸಲಗಳ ನಡುವೆ ಸ್ನೇಹ ಸಂಬಂಧವಿದ್ದರೂ ಆಗಾಗ ಇವೆರಡರ ನಡುವೆ ಯುದ್ಧಗಳು ನಡೆಯುತ್ತಿದ್ದುವು. ಮೊದಲು ಕಾಶಿ ಜಯ ಗಳಿಸಿದರೂ ಅಂತಿಮವಾಗಿ ಕೋಸಲ ವಿಜಯ ಹೊಂದಿತು. ಇದರಿಂದ ಕೋಸಲದ ಪ್ರತಿಷ್ಠೆ ಹೆಚ್ಚಿತಲ್ಲದೆ ಅದು ಶಾಕ್ಯ, ಕಾಲಾಮ ಮುಂತಾದ ನೆರೆಯ ರಾಜ್ಯಗಳ ಮೇಲೆ ತನ್ನ ಅಧಿಕಾರ ಸ್ಥಾಪಿಸಲು ಅನುಕೂಲವಾಯಿತು. ಗೌತಮ ಬುದ್ಧನ ಸಮಕಾಲೀನನಾದ ಪೆಸನದಿ ಅಥವಾ ಪ್ರಸೇನಜಿತ್ ಈ ರಾಜ್ಯದ ಒಬ್ಬ ಪ್ರಮುಖ ದೊರೆ. ಮಗಧದ ಅರಸನಾದ ಅಜಾತಶತ್ರುವಿನೊಂದಿಗೆ ಇವನ ಹಗೆತನವಿತ್ತು. ಇವನ ಅನಂತರ ಬಂದ ವಿಡೂಡಭ ಶಾಕ್ಯರನ್ನು ಮುತ್ತಿಗೆ ಹಾಕಿ ಅವರನ್ನು ಕೊನೆಗೊಳಿಸಿದನೆಂದು ತಿಳಿದುಬಂದಿದೆ. ತರುವಾಯ ವಿಡೂಡಭನ ಅಥವಾ ಕೋಸಲದ ಬಗ್ಗೆ ಏನೂ ತಿಳಿದುಬಂದಿಲ್ಲ.

ಅಂಗ : ಇದು ಈಗಿನ ಪೂರ್ವ ಬಿಹಾರ ಪ್ರದೇಶದಲ್ಲಿತ್ತು. ಇದರ ರಾಜಧಾನಿ ಚಂಪಾರ್ಲಿಮೆಂಟ್ ಮಗಧದೊಡನೆ ಇದಕ್ಕೆ ಸ್ನೇಹಸಂಬಂಧ ಇರಲಿಲ್ಲ.

ಮಗಧ : ಈಗಿನ ದಕ್ಷಿಣ ಬಿಹಾರ. ಗಿರಿವ್ರಜ ಇದರ ರಾಜಧಾನಿ. ಜರಾಸಂಧ, ಬೃಹದ್ರಥ, ಸಹದೇವ, ಸೋಮಾಧಿ, ರಿಪುಂಜರ ಮುಂತಾದವರು ಇಲ್ಲಿದ್ದ ಅರಸರೆಂದು ಹೇಳಲಾಗಿದೆ. ಅರಸರ ಪಟ್ಟಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ.
ವಜ್ಜಿ : ಈಗಿನ ಉತ್ತರ ಬಿಹಾರ. ಇದನ್ನು ವ್ರಿಜಿ, ವಜ್ಜಿಯನ್ ಎಂದೂ ಕರೆಯುತ್ತಾರೆ. ವಜ್ಜಿ ಗಣರಾಜ್ಯವಾಗಿತ್ತು. ವಿದೇಹ, ಲಿಚ್ಛವಿ, ಜ್ಞಾತ್ರಿಕ ಮುಂತಾದ 8-9 ಪಂಗಡಗಳು ಇದರಲ್ಲಿ ಸಮಾವೇಶಗೊಂಡಿದ್ದುವು. ವ್ರಿಜಿಗ್ರಾಮ ವೈಶಾಲಿಯಲ್ಲಿತ್ತು. ವೈಶಾಲಿ ಲಿಚ್ಛವಿದು ರಾಜಧಾನಿಯಾಗಿದ್ದುದಲ್ಲದೆ ಅದು ವ್ರಿಜಿ ಕೂಟದ ಮುಖ್ಯ ಸ್ಥಾನವಾಗಿತ್ತೆಂದು ಹೇಳಲಾಗಿದೆ. ಇದು ಉತ್ತಮಪುರಿ ಎಂದು ಕರೆಯಲ್ಪಡುತ್ತಿತ್ತು ಮತ್ತು ಸಂಪದ್ಭರಿತವಾದ ಇದು ಜನಭರಿತವಾಗಿತ್ತೆಂದೂ ವಿವರಿಸಲ್ಪಟ್ಟಿದೆ. ವಿದೇಹ (ಈಗಿನ ತಿರಹುರ್) ಮುಖ್ಯವಾದ ಅರಸೊತ್ತಿಗೆಯಾಗಿದ್ದು ಅದಕ್ಕೆ ಮಿಥಿಲಾ ರಾಜಧಾನಿಯಾಗಿತ್ತು. ಕನ್ನಿಂಗ್‍ಹ್ಯಾಮ್ ಇದನ್ನು ನೇಪಾಳದ ಹತ್ತಿರ ಇರುವ ಜನಕಪುರದೊಂದಿಗೆ ಹೋಲಿಸಿದ್ದಾರೆ. ಜ್ಞಾತ್ರಿಕರು ವೈಶಾಲಿಯ ಉಪನಗರವಾದ ಕುಂಡಪುರ ಅಥವಾ ಕುಂಡಗ್ರಾಮ, ಕೊಲ್ಲಾಗವನ್ನು ಆಕ್ರಮಿಸಿಕೊಂಡಿದ್ದರು. ಪಾಣಿನಿಯಲ್ಲಿ ವ್ರಿಜಿಗಳ ಬಗ್ಗೆ ಉಲ್ಲೇಖವಿದೆ.

ಲಿಚ್ಛವಿ ಕ್ಷತ್ರಿಯ ಪಂಗಡ. ಮಹಾವೀರ ಹಾಗೂ ಗೌತಮ ಬುದ್ಧನ ಕಾಲದಲ್ಲಿ ಇದು ಸ್ಥಿರವಾಗಿ ಸ್ಥಾಪಿತವಾಗಿ ತನ್ನ ಅನ್ಯೋನ್ಯತೆ ಮತ್ತು ಬಲಗಳಿಂದಾಗಿ ಬುದ್ಧನ ಮೆಚ್ಚುಗೆಗೆ ಪಾತ್ರವಾಗಿತ್ತು. ನೆರೆಯ ಮಲ್ಲರಾಜ್ಯದೊಂದಿಗೆ ಇದು ಸ್ನೇಹವಾಗಿತ್ತು. ಮಗಧದೊಂದಿಗೆ ಇದರ ವೈರತ್ವ. ಬಿಂಬಸಾರನ ಕಾಲದಲ್ಲಿ ಈ ಎರಡೂ ರಾಜ್ಯಗಳ ನಡುವೆ ಕದನವಾಯಿತು.

ಮಲ್ಲ : ಈಗಿನ ಗೋರಖಪುರ ಜಿಲ್ಲೆ. ಜೈನ ಹಾಗೂ ಬೌದ್ಧಗ್ರಂಥಗಳಲ್ಲಿ ಇದರ ಉಲ್ಲೇಖ ಇದೆ. ಅಂಗ, ವಂಗ, ಕಳಿಂಗಗಳೊಂದಿಗೆ ಇದರ ಹೆಸರೂ ಮಹಾಭಾರತದಲ್ಲಿ ಉಕ್ತವಾಗಿದೆ. ಇದು ಪ್ರಬಲವಾಗಿತ್ತು. ಇದರಲ್ಲಿ 9 ಪ್ರಾಂತ್ಯಗಳಿದ್ದುವು. ಮಲ್ಲರನ್ನು ವ್ರಾತ್ಯಕ್ಷತ್ರಿಯರೆಂದು ಮನು ಕರೆದಿದ್ದಾನೆ. ಮಹಾ ಪರಿನಿಬ್ಬಾಣ ಸೂತ್ರ ಇವರನ್ನು ವಾಶಿಷ್ಟ (ವಾಸಿಟ್ಟಿ) ಎಂದು ಕರೆದಿದೆ. ವಿದೇಹದಂತೆ ಇವರದೂ ಅರಸೊತ್ತಿಗೆ. ಇವರದು ಒಂದು ಸಂಘವಾಗಿತ್ತು. ಇದರ ಸದಸ್ಯರು ತಮ್ಮನ್ನು ರಾಜರೆಂದು ಕರೆದುಕೊಳ್ಳುತ್ತಿದ್ದರು. ಬುದ್ಧಘೋಷ ಅವರನ್ನು ರಾಜರೆಂದು ಕರೆಯುತ್ತಾನೆ. ಮಲ್ಲ ಹಾಗೂ ಲಿಚ್ಛವಿಗಳ ನಡುವೆ ಸ್ವಂತ ರಕ್ಷಣೆಗಾಗಿ ಸ್ನೇಹವಿದ್ದರೂ ಅವರ ನಡುವೆ ವೈರವಿತ್ತೆಂದು ಬೌದ್ಧಗ್ರಂಥಗಳಿಂದ ತಿಳಿದು ಬರುತ್ತದೆ. ಮಲ್ಲರಲ್ಲಿ ಅನೇಕರು ಬೌದ್ಧ ಹಾಗೂ ಜೈನಮತದ ಅನುಯಾಯಿಗಳಾಗಿದ್ದರು. ಬುದ್ಧನ ಕಾಲದವರೆಗೆ ಸ್ವತಂತ್ರವಾಗಿದ್ದ ಮಲ್ಲ, ಬುದ್ಧನ ತರುವಾಯ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಮಗಧ ರಾಜ್ಯದಲ್ಲಿ ವಿಲೀನಗೊಂಡಿತು.

ಚೇದಿ : ಈಗಿನ ಬುಂದೇಲ್‍ಖಂಡ. ಚೇತ, ಚೇಟಿ, ಚೇತಯ ಎಂದೂ ಹೆಸರಿದ್ದ ಇದಕ್ಕೆ ಎರಡು ಪ್ರತ್ಯೇಕ ಅಸ್ತಿತ್ವಗಳಿದ್ದುವು. ಶುಕ್ತಿ, ಶುಕ್ತಿಮತಿ ಅಥವಾ ಸೊತ್ತಿವತೀ ನಗರ ಇದರ ರಾಜಧಾನಿ, ಇದರ ಒಂದು ಶಾಖೆ ಕಲಿಂಗದಲ್ಲಿ ಸ್ಥಾಪಿಸಲ್ಪಟ್ಟಿತ್ತೆಂದು ಹೇಳಲಾಗಿದೆ.

ವತ್ಸ : ಈಗಿನ ಅಲಹಾಬಾದಿನ ಸುತ್ತಮುತ್ತಲ ಪ್ರದೇಶ. ಇದು ಸಮೃದ್ಧವಾದ ನಾಡಾಗಿತ್ತು. ಉತ್ತಮವಾದ ಹತ್ತಿಯ ಬಟ್ಟೆಗಳಿಗೆ ಹೆಸರಾಗಿತ್ತು. ಕೌಶಾಂಬಿ ಇದರ ರಾಜಧಾನಿ. ಉದೇನ ಅಥವಾ ಉದಯನ ಇಲ್ಲಿಯ ಪ್ರಸಿದ್ಧ ದೊರೆ. ಇವನ ಮಗ ಬೋಧಿ. ಬೌದ್ಧಗ್ರಂಥಗಳಲ್ಲಿ ಇವನ ಉಲ್ಲೇಖ ಇದ್ದರೂ ಉದಯನನ ತರುವಾಯ ವತ್ಸದ ವಿಚಾರವಾಗಿ ಆಗಲಿ, ಉದಯನನ ಮಗ ಬೋಧಿಯ ವಿಚಾರವಾಗಿ ಆಗಲಿ ಏನೂ ತಿಳಿದುಬರುವುದಿಲ್ಲ.

ಕುರು : ಈಗಿನ ಥಾನೇಶ್ವರ, ದೆಹಲಿ ಮತ್ತು ಮೀರತ್ ಜಿಲ್ಲೆಗಳ ಪ್ರದೇಶ. ಇದರ ರಾಜಧಾನಿ ಇಂದ್ರಪಟ್ಟ (ಇಂದ್ರಪ್ರಸ್ಥ). ಯಾದವ, ಭೋಜ, ಪಾಂಚಾಲಗಳೊಂದಿಗೆ ಇದರ ಸಂಬಂಧವಿತ್ತು. ಇದು ಮೊದಲು ಅರಸೊತ್ತಿಗೆಯಾಗಿತ್ತು; ಕ್ರಮೇಣ ಗಣರಾಜ್ಯವಾಯಿತು.

ಪಾಂಚಾಲ : ಈಗಿನ ಬರೈಲಿ, ಬುಡ್ರ್ವಾನ್ ಮತ್ತು ಫರೂಕಾಬಾದ್ ಜಿಲ್ಲೆ. ಗಂಗಾನದಿ ಇದನ್ನು ಉತ್ತರ ಮತ್ತು ದಕ್ಷಿಣ ಪಾಂಚಾಲಗಳೆಂದು ವಿಭಾಗಿಸಿತ್ತು. ಇದು ಮೊದಲಿಗೆ ಅರಸೊತ್ತಿಗೆಯಾಗಿದ್ದು ಅನಂತರ ಸಂಘ ಅಥವಾ ಗಣರಾಜ್ಯವಾಗಿ ಮಾರ್ಪಟ್ಟಿತು.

ಶೂರಸೇನ : ಈಗಿನ ಮಥುರಾ, ಗ್ರೀಕ್ ಬರಹಗಾರರು ಇದನ್ನು ಸೌರಸೆ ನಾಯ್ ಎಂದೂ ಇದರ ರಾಜಧಾನಿಯನ್ನು ಮೆಥೊರ ಎಂದೂ ಕರೆದಿದ್ದಾರೆ. ಅವಂತಿಪುತ್ರ ಇದರ ದೊರೆ. ಬುದ್ಧನ ಅನುಯಾಯಿಗಳಲ್ಲಿ ಮುಖ್ಯನಾದ ಇವನು ಮಥುರಾ ಪ್ರದೇಶದಲ್ಲಿ ಬೌದ್ಧಮತ ಹರಡಲು ಕಾರಣನಾದ. ಅವಂತಿಯೊಂದಿಗೆ ಇದರ ಸಂಪರ್ಕವಿತ್ತು. ಮೆಗಾಸ್ತನೀಸ್ ಇದು ಶ್ರೀಕೃಷ್ಣನ ಪೂಜಾಸ್ಥಳವಾಗಿತ್ತೆಂದು ತಿಳಿಸುತ್ತಾನೆ.

ಅಸ್ಸಕ : ಇದು ಈಗಿನ ಗೋದಾವರಿಯ ಪ್ರದೇಶದಲ್ಲಿತ್ತು. ಆಶ್ಮಕವೆಂದೂ ಇದಕ್ಕೆ ಹೆಸರು. ಸ್ವಾಲ್ ಕಣಿವೆಯಲ್ಲಿದ್ದ ಅಸ್ಸಕೆನಾಯ್ ಎಂದು ಗ್ರೀಕರ ಬರಹದಿಂದ ತಿಳಿದುಬರುತ್ತದೆ. ಇದನ್ನು ಮಹಾಜನಪದವೆಂದು ಬೌದ್ಧಗ್ರಂಥಗಳು ಕರೆಯುತ್ತವೆ. ಸೋತಲ, ಪೋತನ, ಅಥವಾ ಪೌದನ ಇದರ ರಾಜಧಾನಿ. ಅಸ್ಸಕ ದಕ್ಷಿಣಭಾರತಕ್ಕೆ ಸೇರದ ಒಂದು ಪ್ರದೇಶವೆಂದು ಬೌದ್ಧಗ್ರಂಥಗಳಿಂದ ತಿಳಿದುಬರುತ್ತದೆ. ಅಸ್ಸಕ ಮತ್ತು ಮೂಲಕ ಅಥವಾ ಅಂಗಗಳ ನಡುವೆ ಗೋದಾವರಿ ಹರಿಯುತ್ತಿತ್ತು. ಈ ಎರಡೂ ಪ್ರದೇಶಗಳು ಅಂಧಕ ಅಥವಾ ಆಂಧ್ರ ಪ್ರದೇಶವೆಂದು ಹಲವರ ಅಭಿಪ್ರಾಯ. ಅರ್ಥಶಾಸ್ತ್ರದ ವಿಮರ್ಶಕನಾದ ಭಟ್ಟಸ್ವಾಮಿ ಆಶ್ಮಕವನ್ನು ಮಹಾರಾಷ್ಟ್ರ ಪ್ರದೇಶಕ್ಕೆ ಹೊಂದಿಸುತ್ತಾನೆ. ಹೇಗಿದ್ದರೂ ಇದು ಗೋದಾವರಿಯ ಮೇಲೆ, ಮಧ್ಯ ದೇಶದಿಂದ ಹೊರಗೆ ಇದ್ದ ದೇಶವೆಂದು ತಿಳಿದುಬಂದಿದೆ. ಬ್ರಹ್ಮದತ್ತ, ಅರುಣ, ಸುಜಾತ ಮುಂತಾದವರು ಇದರ ಪ್ರಮುಖ ಅರಸರು.
ಅವಂತಿ : ಈಗಿನ ಮಾಳವ ನಿಮಾರ್ ಮತ್ತು ಮಧ್ಯಪ್ರದೇಶದ ಸುತ್ತ ಮುತ್ತಲಿನ ಪ್ರದೇಶ. ಬೌದ್ಧಮತದ ಸ್ಥಾಪನೆಯ ಹೊತ್ತಿಗೆ ಇದ್ದ ನಾಲ್ಕು ಮುಖ್ಯ ರಾಜ್ಯಗಳಲ್ಲಿ ಇದು ಒಂದಾಗಿತ್ತು (ಉಳಿದ ಮೂರು ಕೋಸಲ, ವತ್ಸ, ಮಗಧ). ಇದು ವೇತ್ರಾವತಿಯಿಂದ ಎರಡು ಭಾಗಗಳಾಗಿ ವಿಭಾಗವಾಗಿತ್ತು. ಮಾಹಿಷ್ಮತಿ ಮತ್ತು ಉಜ್ಜಯಿನಿ ಇವುಗಳ ರಾಜಧಾನಿಗಳು. ಅವಂತಿ ಮತ್ತು ಮಾಹಿಷ್ಮತಿಗಳು ಮಹಾಭಾರತದಲ್ಲಿ ಉಕ್ತವಾಗಿವೆ. ಅವಂತಿ ಬೌದ್ಧಮತದ ಕೇಂದ್ರವಾಗಿತ್ತು. ಮುಖ್ಯರಾದ ಅನೇಕ ಥೇರ ಹಾಗೂ ಥೇರಿಗಳು ಇಲ್ಲಿದ್ದರು. ಚಂಡ ಪ್ರದ್ಯೋತ ಮಹಾಸೇನ ಇದರ ಪ್ರಮುಖ ದೊರೆಯಾಗಿದ್ದನೆಂಬುದು ಪುರಾಣಗಳಿಂದ ತಿಳಿದುಬರುತ್ತದೆ. ಅವನ 23 ವರ್ಷಗಳ ಆಳ್ವಿಕೆಯ ತರುವಾಯ ಪಾಲಕ, ವಿಶಾಖಯೂಪ, ಅಸಕ ಮತ್ತು ನಂದಿವರ್ಧನರು ಇಲ್ಲಿ ಆಳಿದರು. ನಂದಿವರ್ಧನ ಶಿಶುನಾಗರಿಂದ ಸೋಲಿಸಲ್ಪಟ್ಟ. ಬೆಳೆಯುತ್ತಿದ್ದ ಮಗಧ ಸಾಮ್ರಾಜ್ಯದಲ್ಲಿ ಅವಂತಿ ಲೀನವಾಯಿತು.
ಗಾಂಧಾರ : ಈಗಿನ ಪೆಷಾವರ್ ಮತ್ತು ರಾವಲ್ಪಿಂಡಿ ಜಿಲ್ಲೆ. ತಕ್ಕಸಿಲಾ ಅಥವಾ ತಕ್ಷಶಿಲಾ ಇದರ ರಾಜಧಾನಿ. ಇದು ವ್ಯಾಪಾರಸ್ಥಳವಾಗಿದ್ದುದಲ್ಲದೆ ಇದೊಂದು ಹೆಸರಾಂತ ವಿದ್ಯಾಕೇಂದ್ರವಾಗಿತ್ತು.

ಕಾಂಭೋಜ : ಕಾಶ್ಮೀರ ಹಾಗೂ ಕಾಫಿರೀಸ್ಥಾನದ ಸುತ್ತಮುತ್ತಲ ಪ್ರದೇಶ. ಮೊದಲು ಅರಸೊತ್ತಿಗೆಯಾಗಿತ್ತು. ಕೌಟಿಲ್ಯನ ಕಾಲದ ಹೊತ್ತಿಗೆ ಸಂಘವಾಗಿ ಮಾರ್ಪಟ್ಟಿತು.

ಈ 16 ಜನಪದಗಳಲ್ಲದೆ ಇನ್ನೂ ಅನೇಕ ಸ್ವತಂತ್ರ ಗಣರಾಜ್ಯಗಳಿದ್ದುವು. ಕ್ರಿ.ಪೂ.7-9ನೆಯ ಶತಮಾನದಲ್ಲಿ ಪ್ರಾಮುಖ್ಯ ಪಡೆದ ಮಹಾಜನಪದಗಳು ಕ್ರಿ.ಶ. 1-2ನೆಯ ಶತಮಾನದ ವರೆಗೆ ಮುಂದುವರಿದುಕೊಂಡು ಬಂದುವು ಎಂದು ಹೇಳಬಹುದು. ಕಾಲಕ್ರಮದಲ್ಲಿ ಈ ರಾಜ್ಯಗಳು ವೃದ್ಧಿಗೊಳ್ಳುತ್ತಿದ್ದ ಮಗಧ ರಾಜ್ಯದಲ್ಲಿ ಸೇರಿಹೋದುವು.			 (ಎಸ್.ಎಲ್.ಎಸ್.)